ವಿಷಯಕ್ಕೆ ಹೋಗಿ

ಮೆಲಾನಿಯಾ ಭೇಟಿ ನೀಡಿದ್ದ ದೆಹಲಿ ಸರ್ಕಾರಿ ಶಾಲೆಯ 'ಹ್ಯಾಪಿನೆಸ್‌ ಕ್ಲಾಸ್‌'ಗಳು ವಿಶ್ವದ ಗಮನ ಸೆಳೆಯುತ್ತಿರುವುದೇಕೆ?


ಅಮೆರಿಕದ ಫಸ್ಟ್‌ ಲೇಡಿ ಮೆಲಾನಿಯಾ ಟ್ರಂಪ್‌ ಅವರು ದಿಲ್ಲಿಯ ಶಾಲೆಯೊಂದರ 'ಸಂತೋಷದ ತರಗತಿ'ಗೆ ಮಂಗಳವಾರ ಭೇಟಿ ನೀಡಿದರು. ಒತ್ತಡಮುಕ್ತ ಕಲಿಕೆಯ ಉದ್ದೇಶದಿಂದ ರೂಪುಗೊಂಡಿರುವ 'ಹ್ಯಾಪಿನೆಸ್‌ ಕ್ಲಾಸ್‌'ಗಳು ದೇಶ- ವಿದೇಶದ ತಜ್ಞರ ಗಮನ ಸೆಳೆಯುತ್ತಿವೆ. ದಕ್ಷಿಣ ದಿಲ್ಲಿಯ ಮೋತಿಬಾಗ್‌ನ ಸರ್ವೋದಯ ಕೋ ಎಜುಕೇಶನ್‌ ಸೀನಿಯರ್‌ ಸೆಕೆಂಡರಿ ಸ್ಕೂಲ್‌ಗೆ ಮಂಗಳವಾರ ವಿಶೇಷ ಭೇಟಿ ನೀಡಿದ ಮೆಲಾನಿಯಾ ಟ್ರಂಪ್‌, ಅಲ್ಲಿ ನಡೆಯುವ 'ಹ್ಯಾಪಿನೆಸ್‌ ಕ್ಲಾಸ್‌'ನ್ನು ವೀಕ್ಷಿಸಿದರು. ಶಾಲೆಯ ಮಕ್ಕಳು ಅವರನ್ನು ಆರತಿಯೆತ್ತಿ ತಿಲಕವಿಟ್ಟು ಬರಮಾಡಿಕೊಂಡರು. 45 ನಿಮಿಷಗಳ ಕ್ಲಾಸ್‌ ಚಟುವಟಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿದ ಮೆಲಾನಿಯಾ, ತರಗತಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು. ಕೆಲವು ಮಕ್ಕಳ ಪ್ರಾಜೆಕ್ಟ್ ವರ್ಕ್ ವೀಕ್ಷಿಸಿದರು. ಕೆಲವು ಮಕ್ಕಳೊಡನೆ ಮುಕ್ತವಾಗಿ ಹರಟಿದರು. ಒಂದು ಗಂಟೆಯ ಶಾಲೆ ಭೇಟಿಯ ಬಳಿಕ ಹೊರಟು ನಿಂತಾಗ ಅವರು ಹೇಳಿದ ಮಾತು: ''ಇಲ್ಲಿರುವ ಮಕ್ಕಳು ಪ್ರತಿದಿನದ ಮುಂಜಾನೆಯನ್ನು ಕತೆ ಹೇಳುವುದು, ಪ್ರಕೃತಿಯೊಡನೆ ಸಂಭಾಷಿಸುವುದರ ಮೂಲಕ ನೆಮ್ಮದಿಯಿಂದ ಆರಂಭಿಸುತ್ತಾರೆ. ಇದು ತುಂಬ ಸ್ಫೂರ್ತಿ ನೀಡುವಂಥದು. ನಮ್ಮ ದಿನವನ್ನು ಇದಕ್ಕಿಂತ ಅರ್ಥಪೂರ್ಣವಾಗಿ ಸ್ವಾಗತಿಸುವುದನ್ನು ನಾನು ಊಹಿಸಲಾರೆ.'' ತೆರಳುವ ಮುನ್ನ, ಮಕ್ಕಳಲ್ಲಿಉತ್ತಮ ಮೌಲ್ಯಗಳನ್ನು ಬೆಳೆಸುತ್ತಿರುವುದಕ್ಕಾಗಿ ಶಿಕ್ಷಕರನ್ನು ಅಭಿನಂದಿಸಿದ ಅವರು, ಪರಸ್ಪರ ಒಳಿತು ಮಾಡುವಂತೆಯೂ ಮಕ್ಕಳಿಗೆ ಕಿವಿಮಾತು ಹೇಳಿದರು.

​ಏನಿದು ಹ್ಯಾಪಿನೆಸ್‌ ಕ್ಲಾಸ್‌? 


2018ರಲ್ಲಿ ದಿಲ್ಲಿಯ ಶಾಲೆಗಳಲ್ಲಿಆರಂಭಿಸಲಾದ ಈ ತರಗತಿಗಳು, ದಿಲ್ಲಿ ಸರಕಾರದ ಮಹತ್ವದ ಶಿಕ್ಷಣ ಸುಧಾರಣಾ ಕಾರ್ಯಕ್ರಮಗಳಲ್ಲಿಒಂದು. 2018ರಲ್ಲಿಇದನ್ನು ಆರಂಭಿಸಲಾಯಿತು. ದಿಲ್ಲಿಯ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ಆರಂಭಿಸಿದ ಈ ಕಾರ್ಯಕ್ರಮವನ್ನು ದಲಾಯಿ ಲಾಮ ಉದ್ಘಾಟಿಸಿದ್ದರು. ''ಆಧುನಿಕ ಶಿಕ್ಷಣ ಲೌಕಿಕ ಮೌಲ್ಯಗಳ ಮೇಲೆ ನಿಂತಿದೆ. ಆಂತರಿಕ ನೆಮ್ಮದಿಯ ವಿಕಾಸದ ಬಗ್ಗೆ ಅದು ಏನೂ ನೀಡುತ್ತಿಲ್ಲ. ಆಧುನಿಕ ಶಿಕ್ಷಣದ ಜೊತೆಗೆ ಪುರಾತನ ಭಾರತೀಯ ಜ್ಞಾನವನ್ನು ಸಮೀಕರಿಸಿ ನೆಮ್ಮದಿಯನ್ನು ಹೆಚ್ಚಿಸಲು ಭಾರತದಿಂದ ಸಾಧ್ಯವಿದೆ,'' ಎಂದು ದಲಾಯಿ ಲಾಮ ಹೇಳಿದ್ದರು. ದಿಲ್ಲಿಯ ಶಾಲೆಗಳ ಎಲ್‌ಕೆಜಿಯಿಂದ ಹಿಡಿದು 8ನೇ ತರಗತಿಗಳವರೆಗೆ ಇದನ್ನು ನಡೆಸಲಾಗುತ್ತಿದೆ. ಪ್ರತಿದಿನ ಮುಂಜಾನೆಯ 45 ನಿಮಿಷಗಳ ಮೊದಲ ತರಗತಿ ಈ ಹ್ಯಾಪಿನೆಸ್‌ ಕ್ಲಾಸ್‌ಗೆ ಮೀಸಲು. ಸುಮಾರು 10 ಲಕ್ಷ ವಿದ್ಯಾರ್ಥಿಗಳು ಹಾಗೂ 50,000 ಶಿಕ್ಷಕರು ಈ ತರಗತಿಗಳಲ್ಲಿ ಪಾಲ್ಗೊಳ್ಳುತ್ತಾರೆ. 

​ಇದಕ್ಕೊಂದು ಪಠ್ಯವಿದೆಯೇ? 


'ಹ್ಯಾಪಿನೆಸ್‌ ಕರಿಕ್ಯುಲಂ' ಅರ್ಥ ಸಂತೋಷದ ಪಠ್ಯಕ್ರಮವನ್ನು ಎಚ್ಚರಿಕೆಯಿಂದ ರೂಪಿಸಲಾಗಿದೆ. ಮೊದಲು ಸಣ್ಣಪುಟ್ಟ ದೈಹಿಕ ವ್ಯಾಯಾಮಗಳನ್ನು ಮಕ್ಕಳಿಗೆ ಮಾಡಿಸಲಾಗುತ್ತದೆ. ನಂತರ ಧ್ಯಾನ. ಸುತ್ತಲಿನ ಸದ್ದುಗಳನ್ನು ಗಮನವಿಟ್ಟು ಆಲಿಸುವುದು ಮತ್ತು ಅದನ್ನು ಅನುಭವಿಸುವಿಕೆಯನ್ನು ಹೇಳಿಕೊಡಲಾಗುತ್ತದೆ. ನಂತರದ ಸಮಯ ಕತೆ ಹೇಳುವುದಕ್ಕೆ, ಪ್ರಶ್ನೆಗಳನ್ನು ಕೇಳುವುದಕ್ಕೆ, ಚಟುವಟಿಕೆಗಳಿಗೆ ಮೀಸಲು. ರೋಲ್‌ ಪ್ಲೇಗಳು, ಪ್ರಹಸನಗಳನ್ನು ಆಡಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಮಾತನಾಡಲು, ಪ್ರಶ್ನಿಸಲು ಆಸ್ಪದವಿದೆ. ''ಅನುಭವದ ಮೂಲಕ, ಪ್ರಯೋಗದ ಮೂಲಕ, ವಸ್ತುಗಳನ್ನು ತಾವೇ ರೂಪಿಸುವುದರ ಮೂಲಕ, ಓದು- ಚರ್ಚೆ- ಪ್ರಶ್ನೆಯ ಮೂಲಕ, ಚಿಂತನೆಯ ಮೂಲಕ, ಭಾಷಣದ ಮೂಲಕ, ಚಲನೆ ಮತ್ತು ಬರೆಯುವಿಕೆಯ ಮೂಲಕ, ವೈಯಕ್ತಿಕವಾಗಿ ಹಾಗೂ ಗುಂಪಿನಲ್ಲಿಮಕ್ಕಳು ಈ ತರಗತಿಗಳಲ್ಲಿನಾನಾ ವಿಚಾರಗಳನ್ನು ಕಲಿಯುತ್ತಾರೆ,'' ಎಂದು ಶಿಕ್ಷಣ ಇಲಾಖೆ ಹೇಳಿದೆ. ರಾಷ್ಟ್ರೀಯ ಪಠ್ಯಕ್ರಮ ಸಮಿತಿ (ಎನ್‌ಸಿಇಆರ್‌ಟಿ) ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಯೇ ಇದರ ಪಠ್ಯಕ್ರಮ ರೂಪಿಸಲಾಗಿದೆ. 

​ಯಾಕೆ ಈ ಪಠ್ಯಕ್ರಮ? 


ಭಾರತದಲ್ಲಿ ನಡೆಯುವ ಆತ್ಮಹತ್ಯೆಗಳ ಬಗ್ಗೆ ನಡೆಸಲಾದ ಒಂದು ಅಧ್ಯಯನದಲ್ಲಿ ಗೊತ್ತಾದ ವಿಷಯವೇನೆಂದರೆ, ಜೀವನದ ಇತರ ಸಮಸ್ಯೆಗಳ ಜೊತೆಗೆ, ಯಶಸ್ಸು ಅಥವಾ ಕಲಿಕೆಯ ಒತ್ತಡವೂ ಆತ್ಮಹತ್ಯೆಗೆ ಒಂದು ಕಾರಣವಾಗಿದೆ. ಹಲವು ವರ್ಗಗಳಿಂದ ಬಂದ ಮಕ್ಕಳು ಕಲಿಕಯ ನ್ಯೂನತೆಗೆ ತುತ್ತಾದಾಗ, ಅದನ್ನು ಎದುರಿಸಲಾಗದೆ, ಅದರಿಂದ ಉಂಟಾಗುವ ಕಲಿಕೆಯ ಒತ್ತಡವನ್ನು ನಿಭಾಯಿಸಲಾಗದೆ ಹೋಗುತ್ತಾರೆ. ಹೆತ್ತವರು ಮತ್ತು ಸುತ್ತಮುತ್ತಲಿನ ಸಮಾಜ ಅವರಲ್ಲಿನೂರಕ್ಕೆ ನೂರು ಅಂಕ ಗಳಿಸುವ ಹಾಗೂ ಯಶಸ್ಸನ್ನು ಹೊಂದುವ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಮಕ್ಕಳು ಖಿನ್ನತೆಗೊಳಗಾಗುತ್ತಾರೆ. ಇದು ಜೀವನವಿಡೀ ಕಾಡುತ್ತದೆ. ಇದನ್ನು ನಿವಾರಿಸಲು ಕಲಿಕೆಯು ಸಂತೋಷವೆನಿಸಬೇಕು. ಶಾಲೆಯ ಮೊದಲನೇ ಅವಧಿಯು ಪ್ರಫುಲ್ಲತೆಯನ್ನು ಉಂಟುಮಾಡುವಂತಿದ್ದು ಚೇತೋಹಾರಿಯಾಗಿದ್ದರೆ, ಮಕ್ಕಳು ಮತ್ತು ಶಿಕ್ಷಕರ ನಡುವೆ ಆತ್ಮೀಯ ಸೌಹಾರ್ದ ವಾತಾವರಣ ಸೃಷ್ಟಿಯಾಗಿದ್ದರೆ ಕಲಿಕೆಯು ನೆಮ್ಮದಿಯ ವಿಚಾರವಾಗಿರುತ್ತದೆ ಎಂಬುದು ಈ ಪಠ್ಯಕ್ರಮದ ಮೂಲ ಆಶಯ. ಪಠ್ಯಪುಸ್ತಕಗಳನ್ನು ಆಧರಿಸಿದ ಕಲಿಕೆಯಿಂದ ಹೊರತಾದ, ಪರಿಣಾಮಕಾರಿ ಸಂವಹನ ಮತ್ತಿತರ ಜೀವನಾವಶ್ಯಕ ಕೌಶಲಗಳನ್ನು ಮಕ್ಕಳು ಇದರ ಮೂಲಕ ಕಲಿಯುತ್ತಾರೆ. 

​ಈ ಕೆಳಗಿನ ಕೌಶಲಗಳ ಅಳವಡಿಕೆ ಇದರ ಉದ್ದೇಶ: 

- ಸ್ವಂತದ ಅರಿವು ಹಾಗೂ ನೆಮ್ಮದಿ ಪಡೆಯುವಿಕೆಯ ಅರಿವನ್ನು ಹೆಚ್ಚಿಸುವುದು.

- ವೈಚಾರಿಕ ಚಿಂತನೆ, ಪ್ರಶ್ನಿಸುವ ಪ್ರವೃತ್ತಿ ಬೆಳೆಸುವುದು.

- ಪರಿಣಾಮಕಾರಿ ಸಂವಹನ ಕೌಶಲ್ಯ ವೃದ್ಧಿ.

- ಒತ್ತಡ ಮುಕ್ತಿ, ಖಿನ್ನತೆಯ ನಿವಾರಣೆ, ಅಸಹಿಷ್ಣುತೆಯ ನಿವಾರಣೆ.

- ಸಹಾನುಭೂತಿ ಮೊದಲಾದ ಸಾಮಾಜಿಕ- ಭಾವನಾತ್ಮಕ ಮೌಲ್ಯಗಳ ಕಲಿಕೆ.

- ಆತ್ಮವಿಶ್ವಾಸಯುಕ್ತ ಹಾಗೂ ನೆಮ್ಮದಿಯುಕ್ತ ವ್ಯಕ್ತಿತ್ವವಾಗಿ ರೂಪುಗೊಳ್ಳುವಿಕೆ. 

ಪರಿಣಾಮ ಕಾಣುತ್ತಿದೆಯೇ?


ಈ ಪಠ್ಯಕ್ರಮ ಆರಂಭವಾಗಿ ಈಗಿನ್ನೂ ಎರಡು ವರ್ಷಗಳಾಗುತ್ತಿದೆ. ಇದರ ಆತ್ಯಂತಿಕ ಪರಿಣಾಮವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಮಕ್ಕಳಲ್ಲಿಧನಾತ್ಮಕ ಪ್ರಗತಿಯೊಂದು ಕಾಣುತ್ತಿದೆ ಎಂಬುದನ್ನು ಶಿಕ್ಷಕಕರು, ಹೆತ್ತವರು ಹಾಗೂ ಸ್ವತಃ ವಿದ್ಯಾರ್ಥಿಗಳು ಕೂಡ ಗುರುತಿಸಿದ್ದಾರೆ. ಮನೆಯಲ್ಲಿಅಥವಾ ಕುಟುಂಬದಲ್ಲಿಕಾಡುವ ಯಾವುದಾದರೂ ಸಮಸ್ಯೆಯನ್ನು ಮನದಲ್ಲಿಟ್ಟುಕೊಂಡು ಶಾಲೆಗೆ ಬರುವ ವಿದ್ಯಾರ್ಥಿಯನ್ನು ಈ ನೆಮ್ಮದಿ ಕ್ಲಾಸುಗಳು ಸಾಂತ್ವನಕ್ಕೊಳಪಡಿಸುತ್ತವೆ. ಮುಂದಿನ ತರಗತಿಗಳತ್ತ ಲಕ್ಷ್ಯ ಕೊಡುವಂತೆ ಮಾಡುತ್ತವೆ. ಮಕ್ಕಳು ಕೂಡ ಶಾಲೆಗೆ ಹೋಗುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹಾಜರಾತಿ ಹೆಚ್ಚುತ್ತಿದೆ. 

ಪರೀಕ್ಷೆ ಹೇಗೆ?

ಇತರ ಪಠ್ಯಗಳಂತೆ ಈ ಪಠ್ಯಕ್ರಮಕ್ಕೂ ವರ್ಷದ ಕೊನೆಯಲ್ಲಿಒಂದು ಮೌಲ್ಯಮಾಪನವಿದೆ. ಆದರೆ ಇದು ಇತರ ಪರೀಕ್ಷೆಗಳಂತೆ ಬರೆಯುವುದರ ಮೂಲಕವಲ್ಲ. ಇದರಲ್ಲಿಪಾಸು ಅಥವಾ ಫೇಲು ಎಂಬ ಪರಿಕಲ್ಪನೆಗಳಿಗೂ ಜಾಗವಿಲ್ಲ. ಮಕ್ಕಳ 'ಹ್ಯಾಪಿನೆಸ್‌ ಇಂಡೆಕ್ಸ್‌' ಅಥವಾ 'ಸಂತೋಷದ ಸೂಚ್ಯಂಕ'ವನ್ನು ಅಳೆಯುವ ಮೂಲಕ ಇದನ್ನು ಮಾಡಲಾಗುತ್ತದೆ. ಹಾಗಂತ ಇದಕ್ಕೆ ಅಂಕಗಳೂ ಇಲ್ಲ. ಕಲಿಕೆಯ ಕೊನೆಗಿಂತಲೂ, ಕಲಿಕೆಯ ಪ್ರಕ್ರಿಯೆಯೇ ಮುಖ್ಯವಾದ ಪರೀಕ್ಷೆ ಇದು

ಸಂತೋಷಕ್ಕೊಂದು ಸೂಚ್ಯಂಕ ಇದೆಯೇ?

ಇದೆ. ಯಾವ ದೇಶದ ಜನ ಎಷ್ಟು ಸುಖಿಗಳಾಗಿದ್ದಾರೆ ಎಂಬುದನ್ನು ವಿಶ್ವಸಂಸ್ಥೆ ತನ್ನದೇ ಆದ ವಿಧಾನಗಳಿಂದ ಅಳೆಯುತ್ತದೆ. 2019ರಲ್ಲಿವಿಶ್ವಸಂಸ್ಥೆ 'ವಿಶ್ವ ಸಂತೋಷ ಸೂಚ್ಯಂಕ ಪಟ್ಟಿ'ಯನ್ನು ಬಿಡುಗಡೆ ಮಾಡಿತು. ಅದರಲ್ಲಿಫಿನ್ಲೆಂಡ್‌ ಮೊದಲ ಸ್ಥಾನದಲ್ಲಿದೆ. 2018ರಲ್ಲಿ133ನೇ ಸ್ಥಾನದಲ್ಲಿದ್ದ ಭಾರತ, 2019ರಲ್ಲಿ140ನೇ ಸ್ಥಾನಕ್ಕೆ ಇಳಿದಿತ್ತು. ನಮ್ಮ ಅಕ್ಕಪಕ್ಕದ ದೇಶಗಳಾದ ನೇಪಾಳ ಹಾಗೂ ಭೂತನ್‌ಗಳ ಸ್ಥಾನ 100ರ ಒಳಗೇ ಇವೆ. ಭೂತಾನ್‌ ತನ್ನ ದೇಶದ ಸಾಧನೆಯನ್ನು 'ಜಿಡಿಪಿ'(ಒಟ್ಟು ರಾಷ್ಟ್ರೀಯ ಉತ್ಪನ್ನ)ಗಿಂತಲೂ ಹೆಚ್ಚಾಗಿ 'ಒಟ್ಟು ರಾಷ್ಟ್ರೀಯ ಸಂತೋಷ'(ಜಿಎನ್‌ಎಚ್‌) ನಿಂದಲೇ ಗುರುತಿಸಿಕೊಳ್ಳುತ್ತದೆ.

ಭೇಟಿ ನೀಡಿದ ಗಣ್ಯರು:

ಮೆಲಾನಿಯಾ ಅಲ್ಲದೆ, ಅಫಘಾನಿಸ್ತಾನದ ಶಿಕ್ಷಣ ಸಚಿವ ಮೊಹಮ್ಮದ್‌ ಮಿರ್ವಾಯಿಸ್‌ ಬಾಲ್ಖಿ ಅವರೂ ಕಳೆದ ವರ್ಷ ಹ್ಯಾಪಿನೆಸ್‌ ಕ್ಲಾಸಿಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆ ವೀಕ್ಷಿಸಿದ್ದರು. ತಮ್ಮ ದೇಶದಲ್ಲೂಇದನ್ನು ಅಳವಡಿಸುವುದಾಗಿ ಹೇಳಿದ್ದರು. ನಾನಾ ರಾಜ್ಯಗಳ ಶಿಕ್ಷಣ ಸಚಿವರು, ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.

ದೆಹಲಿ ಸರ್ಕಾರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಭಾಷಣ :


ನಮಸ್ತೆ. ಇದು ಅತ್ಯಂತ ಸುಂದರವಾದ ಶಾಲೆ. ನೃತ್ಯಪ್ರದರ್ಶನದಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ನನ್ನನ್ನು ಈ ಶಾಲೆಗೆ ಸ್ವಾಗತಿಸಿದ್ದಕ್ಕೆ ಧನ್ಯವಾದ. ಭಾರತಕ್ಕೆ ಇದು ನನ್ನ ಮೊದಲ ಭೇಟಿ. ಇಲ್ಲಿನ ಜನರು ಆದರಣೀಯವಾಗಿ ಮತ್ತು ಆತ್ಮೀಯವಾಗಿ ನಮ್ಮನ್ನು ಬರಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ನಾನು ಬಿ ಬೆಸ್ಟ್​ (BE BEST) ಎಂಬ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದೇನೆ. ಈ ಮೂಲಕ ನಿಮ್ಮಂತಹ ಮಕ್ಕಳೊಂದಿಗೆ ಮಾತನಾಡುತ್ತೇನೆ. ಅವರೊಂದಿಗೆ ಸಂವಾದ ನಡೆಸುತ್ತೇನೆ. ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯ ಸೇವನೆಯ ಅಪಾಯವನ್ನು ತಿಳಿಸುವುದು, ಅಂತರ್ಜಾಲ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಈ ಬಿ ಬೆಸ್ಟ್​ನ ಮುಖ್ಯ ಉದ್ದೇಶ. ಒಟ್ಟಾರೆ ಮಕ್ಕಳ ಯೋಗಕ್ಷೇಮವನ್ನೇ ಗುರಿಯಾಗಿಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಸಾವಧಾನತೆಯನ್ನು ಬೆಳೆಸಿಕೊಳ್ಳುವ ಹಾಗೂ ಪ್ರಕೃತಿಯೊಂದಿಗೆ ಸಂಪರ್ಕಿಸಿಕೊಳ್ಳುವ ಮೂಲಕ ತಮ್ಮ ದಿನವನ್ನು ಆರಂಭಿಸುವುದು ಸ್ಫೂರ್ತಿದಾಯಕವಾಗಿದೆ. ಭರವಸೆಯ ಭವಿಷ್ಯವನ್ನು ಈ ಮೂಲಕ ಖಚಿತಪಡಿಸಿಕೊಳ್ಳಲು ಶಿಕ್ಷಣ ತಜ್ಞರಿಗೆ ಇದು ಆರೋಗ್ಯದಾಯಕ ಮತ್ತು ಸಕಾರಾತ್ಮಕ ಉದಾಹರಣೆಯಾಗಿದೆ. ಈ ಆನಂದದ ತರಗತಿ ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಶಾಲೆಗಳಲ್ಲಿ ನಡೆಯಬೇಕು.

ಕಾಮೆಂಟ್‌ಗಳು

ನೆಚ್ಚಿನ ಪೋಸ್ಟ್