ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ನಿತ್ಯವೂ 1.5 ಜಿಬಿವರೆಗೂ ಡೇಟಾದ ಉಚಿತ ಅಂತರ್ಜಾಲ ಸೌಲಭ್ಯ ಒದಗಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಕಟಿಸಿದರು.
ಈ ಸವಲತ್ತಿನ ಮೂಲಕ ನಮ್ಮ ಪ್ರಣಾಳಿಕೆಯ ಕೊನೆಯ ಭರವಸೆಯನ್ನು ಪೂರ್ಣಗೊಳಿಸುತ್ತಿದ್ದೇವೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು.
ರಾಷ್ಟ್ರದ ರಾಜಧಾನಿಯಾದ್ಯಂತ ಸುಮಾರು 11,000 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಡಿ.16ರ ವೇಳೆಗೆ 100 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ನಂತರ ಪ್ರತಿ ವಾರ 500 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ಎಲ್ಲ ಹಾಟ್‌ಸ್ಪಾಟ್‌ಗಳನ್ನೂ ಆರು ವಾರದ ಒಳಗೆ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಈ ಉದ್ದೇಶಕ್ಕಾಗಿ ಆಪ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಪ್ರೆಸ್ಟೋ ಎಂಬ ಕಂಪೆನಿ ಈ ಯೋಜನೆಯನ್ನು ನಿರ್ವಹಿಸುತ್ತಿದೆ. ದೆಹಲಿಯಾದ್ಯಂತ ಉಚಿತ ಇಂಟರ್ನೆಟ್ ಒದಗಿಸುವ ಈ ಯೋಜನೆಗೆ 100 ಕೋಟಿ ರೂ ವೆಚ್ಚ ತಗಲುತ್ತದೆ ಎಂದು ವಿವರಿಸಿದರು.
ಇದರಿಂದ ದೆಹಲಿಯ ನಿವಾಸಿಗಳು ತಿಂಗಳಿಗೆ 15 ಜಿಬಿ ಡೇಟಾ ಪಡೆದುಕೊಳ್ಳಲಿದ್ದಾರೆ. 4,000 ಹಾಟ್‌ಸ್ಪಾಟ್‌ಗಳು ಬಸ್ ನಿಲ್ದಾಣಗಳಲ್ಲಿ ಲಭ್ಯವಾಗಲಿವೆ. ಇನ್ನು 7,000 ಮಾರುಕಟ್ಟೆ, ನಿವಾಸಿ ಅಭಿವೃದ್ಧಿ ಸಂಸ್ಥೆಗಳು ಮತ್ತು ನಗರದ ಇತರೆ ಸ್ಥಳಗಳಲ್ಲಿ ಸಿಗಲಿವೆ ಎಂದರು.
ಕನಿಷ್ಠ ಡೇಟಾ ಬಳಕೆಯು ಜನರ ಮೂಲ ಅಗತ್ಯಗಳಲ್ಲಿ ಒಂದಾಗಿದೆ. ಈ ಸೌಲಭ್ಯದಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಪ್ರತಿ ಹಾಟ್‌ಸ್ಪಾಟ್‌ನಲ್ಲಿ ಒಮ್ಮೆಗೆ 150-200 ಮಂದಿ ಬಳಕೆ ಮಾಡಬಹುದಾಗಿದೆ. ಇಡೀ ನೆಟ್‌ವರ್ಕ್ ಏಕಕಾಲದಲ್ಲಿ ಸುಮಾರು 22 ಲಕ್ಷ ಬಳಕೆದಾರರನ್ನು ನಿಭಾಯಿಸಲಿದೆ. ಒಂದು ಹಾಟ್‌ಸ್ಪಾಟ್‌ನಿಂದ ಇನ್ನೊಂದಕ್ಕೆ ಸ್ವಯಂಚಾಲಿತವಾಗಿಯೇ ಬದಲಾಗುತ್ತದೆ. 2015ರಲ್ಲಿ ಎಎಪಿ ಅಧಿಕಾರಕ್ಕೆ ಬಂದಾಗಲೇ ಈ ಯೋಜನೆಯನ್ನು ಘೋಷಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ವಿಳಂಬವಾಗಿತ್ತು ಎಂದು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ