ವಿಷಯಕ್ಕೆ ಹೋಗಿ

ಆಮ್‌ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ. ರಾಷ್ಟ್ರೀಯ ಪಕ್ಷ ಆಗಿದ್ದು ಹೇಗೆ?

ಬಿಜೆಪಿ ಮತ್ತು ಕಾಂಗ್ರೆಸ್​ಗೆ ತೀವ್ರ ಪೈಪೋಟಿ ನೀಡುವ ಆಮ್​ ಆದ್ಮಿ ಪಕ್ಷ ಎದುರಾಗಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ನಂತರ ಇದು ಕೂಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷವೆಂದರೆ ಒಂದು ಪಕ್ಷವು ರಾಷ್ಟ್ರೀಯವಾಗಿ ಅಸ್ತಿತ್ವವನ್ನು ಹೊಂದಿದೆ ಎಂದರ್ಥ. ಪ್ರಾದೇಶಿಕವಾಗಿ ಹುಟ್ಟಿಕೊಂಡ ಒಂದು ಪಕ್ಷವು ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ.

ಕೇವಲ 10 ವರ್ಷಗಳಲ್ಲಿ ದೆಹಲಿಯಲ್ಲಿ 2 ಬಾರಿ ಅಧಿಕಾರ, ಪಂಜಾಬ್‌ನಲ್ಲಿ ಸರಕಾರ ರಚನೆ, ಗೋವಾದಲ್ಲಿ 2 ಸೀಟು ಗಳಿಕೆ, ಅಭೂತಪೂರ್ವ ಗೆಲುವಿನ ಮೂಲಕ ದೆಹಲಿ ಮಹಾನಗರ ಪಾಲಿಕೆಯಲ್ಲಿ ಪಾರಮ್ಯ, ಮೊನ್ನೆಯ ಗುಜರಾತ್‌ ಚುನಾವಣೆಯಲ್ಲಿ 5 ಸೀಟು - ಇದು ಆಮ್​ ಆದ್ಮಿ ಪಕ್ಷ ಹೆಗ್ಗಳಿಕೆ.

ಪ್ರಸ್ತುತ ದೆಹಲಿಯ ಆಮ್‌ ಆದ್ಮಿ ಕಚೇರಿ ಮುಂಭಾಗದಲ್ಲಿ ದೊಡ್ಡ ಫ್ಲೆಕ್ಸ್‌ ತೂಗಿಬಿದ್ದಿದೆ. 'ಆಮ್‌ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸಿದ ಎಲ್ಲ ದೇಶವಾಸಿಗಳಿಗೂ ಅಭಿನಂದನೆಗಳು'!


ಆಮ್​ ಆದ್ಮಿ ಪಕ್ಷ ಈಗ 9ನೇ ರಾಷ್ಟ್ರೀಯ ಪಕ್ಷ

ಚುನಾವಣಾ ಆಯೋಗದ ಪ್ರಕಾರ, ದೇಶದಲ್ಲಿ 3 ವಿಧದ ಪಕ್ಷಗಳಿವೆ. ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಪಕ್ಷಗಳು. ಒಟ್ಟು 2858 ರಾಜಕೀಯ ಪಕ್ಷಗಳು ನೋಂದಾಯಿಸಲ್ಪಟ್ಟಿವೆ. ಈ ಪೈಕಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವುದು ಕೇವಲ 8 ಪಕ್ಷಗಳು: ಕಾಂಗ್ರೆಸ್‌, ಬಿಜೆಪಿ, ಬಿಎಸ್ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ, ಎನ್‌ಪಿಪಿ ಮತ್ತು ಟಿಎಂಸಿ. ಇವುಗಳೊಂದಿಗೆ ಈಗ 9ನೇ ರಾಷ್ಟ್ರೀಯ ಪಕ್ಷವಾಗಿ ಆಮ್​ ಆದ್ಮಿ ಪಕ್ಷ ಸೇರ್ಪಡೆಗೊಂಡಿದೆ. 350ಕ್ಕೂ ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ.

ಭಾರತದಲ್ಲಿ ರಾಷ್ಟ್ರೀಯ ಪಕ್ಷವಾಗಲು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು

  1. ಲೋಕಸಭೆ ಅಥವಾ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಯಾವುದೇ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪಕ್ಷವು ಶೇ 6 ಮತಗಳನ್ನು ಪಡೆದರೆ ಅಥವಾ ಪಕ್ಷವು ನಾಲ್ಕು ಲೋಕಸಭಾ ಸ್ಥಾನಗಳನ್ನು ಪಡೆದಿದ್ದರೆ ಅದನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಲಾಗುತ್ತದೆ.
  2. ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವು ಕನಿಷ್ಠ ಮೂರು ರಾಜ್ಯಗಳಿಂದ ಸ್ಪರ್ಧಿಸಿ ಶೇ 2 ಸ್ಥಾನಗಳನ್ನು ಗೆದ್ದರೆ ಆ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಅರ್ಹತೆಯನ್ನು ಹೊಂದಿದೆ.
  3. ಪಕ್ಷವು ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಮನ್ನಣೆ ಗಳಿಸಿದ್ದರೆ ರಾಷ್ಟ್ರೀಯ ಪಕ್ಷವಾಗಲು ಅರ್ಹತೆಯನ್ನು ಹೊಂದಿರುತ್ತದೆ.
ಒಂದು ಪಕ್ಷವು ರಾಜ್ಯ ಪಕ್ಷವಾಗಿ ಹೊರಹೊಮ್ಮಲು ಕೂಡ ಅದರದ್ದೇ ಆದ ಅರ್ಹತೆಗಳು, ಮಾಹದಂಡಗಳು ಅಥವಾ ಅಗತ್ಯತೆಗಳನ್ನು ಪೂರೈಸಬೇಕು.

ರಾಜ್ಯ ಪಕ್ಷವಾಗಿ ಗುರುತಿಸಲ್ಪಡಲು ಪಕ್ಷಕ್ಕೆ ಬೇಕಾದ ಅಗತ್ಯತೆಗಳು ಏನೇನು?

  1. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕನಿಷ್ಠ ಶೇ 6 ಮತಗಳನ್ನು ಮತ್ತು ಕನಿಷ್ಠ 2 ಶಾಸಕರನ್ನು ಹೊಂದಿರಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲಿ ಆ ರಾಜ್ಯದಿಂದ ಶೇ 6 ಮತ ಪಾಲನ್ನು ಹೊಂದಿರುವುದು ಮತ್ತು ಆ ರಾಜ್ಯದಿಂದ ಕನಿಷ್ಠ ಒಬ್ಬ ಸಂಸದರನ್ನು ಹೊಂದಿರುವುದು. 
  2. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಸ್ಥಾನಗಳ ಕನಿಷ್ಠ ಶೇ 3 ಅಥವಾ ಮೂರು ಸ್ಥಾನಗಳು ಯಾವುದು ಹೆಚ್ಚೋ ಅದು. 
  3. ರಾಜ್ಯದಿಂದ ಕಳೆದ ವಿಧಾನಸಭೆ ಚುನಾವಣೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಮಾನ್ಯ ಮತಗಳ ಕನಿಷ್ಠ ಶೇ 8 ಅನ್ನು ಹೊಂದಿರಬೇಕು.

ರಾಷ್ಟ್ರೀಯ ಪಕ್ಷವಾದರೆ ಏನು ಪ್ರಯೋಜನ?

  1. ಪಕ್ಷದ ಚಿಹ್ನೆಯನ್ನು ಭಾರತದಾದ್ಯಂತ ಬೇರಾವುದೇ ರಾಜಕೀಯ ಪಕ್ಷವು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ.
  2. ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಕಚೇರಿ ಸ್ಥಾಪಿಸಲು ಸರಕಾರದಿಂದ ಭೂಮಿ ಅಥವಾ ಕಟ್ಟಡವನ್ನು ಪಡೆಯುತ್ತವೆ.
  3. ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಕ್ಕೆ ಚುನಾವಣಾ ಆಯೋಗವು 2 ಸೆಟ್‌ ಮತದಾರರ ಪಟ್ಟಿಗಳನ್ನು ಉಚಿತವಾಗಿ ನೀಡುತ್ತದೆ. ಅಲ್ಲದೆ, ರಾಷ್ಟ್ರೀಯ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯ ಪ್ರತಿಯನ್ನು ಉಚಿತವಾಗಿ ಪಡೆಯುತ್ತಾರೆ.
  4. ರಾಷ್ಟ್ರೀಯ ಪಕ್ಷಗಳು ಗರಿಷ್ಠ 40 ಮಂದಿ ಸ್ಟಾರ್‌ ಪ್ರಚಾರಕರನ್ನು ಹೊಂದಬಹುದು. ಆದರೆ, ರಾಜ್ಯ ಅಥವಾ ರಾಷ್ಟ್ರೀಯ ಪಕ್ಷಗಳಿಗೆ ಈ ಅವಕಾಶ ಕೇವಲ 20 ಸ್ಟಾರ್‌ ಪ್ರಚಾರಕರಿಗೆ ಸೀಮಿತ. ಪಕ್ಷದ ಅಭ್ಯರ್ಥಿಯ ಚುನಾವಣಾ ವೆಚ್ಚದಲ್ಲಿ ಸ್ಟಾರ್‌ ಪ್ರಚಾರಕರ ಪ್ರಯಾಣ ಮತ್ತು ಇತರ ವೆಚ್ಚಗಳನ್ನು ಸೇರಿಸುವ ಅಗತ್ಯ ಬೀಳುವುದಿಲ್ಲ.
  5. ರಾಷ್ಟ್ರೀಯ ಮಾಧ್ಯಮಗಳಲ್ಲಿ ಉಚಿತ ನಿರ್ದಿಷ್ಟ ಪ್ರಸಾರ ಪಡೆದು, ಪಕ್ಷದ ಸಂದೇಶಗಳನ್ನು ರವಾನಿಸಬಹುದು.

ರಾಷ್ಟ್ರೀಯ ಪಕ್ಷವಾಗಲು ಆಮ್​ ಆದ್ಮಿ ಪಕ್ಷ ಅರ್ಹತೆ

2020 ದೆಹಲಿ ವಿಧಾನಸಭೆ ಚುನಾವಣೆ - ಶೇ 53.57ರಷ್ಟು ಮತ ಗಳಿಸಿದೆ (62 ಸ್ಥಾನಗಳನ್ನು ಪಡೆದಿದೆ)
2022 ಪಂಜಾಬ್ ವಿಧಾನಸಭೆ ಚುನಾವಣೆ - ಶೇ 42.01ರಷ್ಟು ಮತ ಗಳಿಸಿದೆ (92 ಸ್ಥಾನಗಳನ್ನು ಪಡೆದಿದೆ)
2022 ಗೋವಾ ವಿಧಾನಸಭೆ ಚುನಾವಣೆ - ಶೇ 6.8ರಷ್ಟು ಮತ ಗಳಿಸಿದೆ (2 ಸ್ಥಾನಗಳನ್ನು ಪಡೆದಿದೆ)
2022 ಗುಜರಾತ್ ವಿಧಾನಸಭೆ ಚುನಾವಣೆ - ಶೇ 12.82 ಹೆಚ್ಚು ಮತಗಳಿಸಿದೆ (5 ಸ್ಥಾನಗಳನ್ನು ಪಡೆದಿದೆ)


(ಈ ಲೇಖನದಲ್ಲಿನ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ)



ಕಾಮೆಂಟ್‌ಗಳು

ನೆಚ್ಚಿನ ಪೋಸ್ಟ್